ಚೀನಾ ದೇಶದ ಹಕ್ಕಿಗೆ ಕಟ್ಟಿದ್ದ ರೇಡಿಯೋ ಫ್ರೀಕ್ವೆನ್ಸಿ ಡಿವೈಸ್ ಬಾಗಲಕೋಟೆಯಲ್ಲಿ ಪತ್ತೆ..!

ಬಾಗಲಕೋಟೆ: ಚೀನಾ ಪಕ್ಷಿ ಸಂಶೋಧಕರು ಹಕ್ಕಿಯೊಂದಕ್ಕೆ ಕಟ್ಟಿದ್ದ ರೇಡಿಯೋ ಕಾಲರ್ ಒಂದು ಬಾಗಲಕೋಟೆ ಜಿಲ್ಲೆಯಲ್ಲಿ ಪತ್ತೆಯಾಗಿದೆ.‌ ಬಾಗಲಕೋಟೆ ತಾಲ್ಲೂಕಿನ ಕಿರಸೂರು ಗ್ರಾಮದ ಬಳಿಯಲ್ಲಿ ಚೀನಾ ಹಕ್ಕಿಗೆ ಕಟ್ಟಿದ್ದ ರೇಡಿಯೋ ಫ್ರಿಕ್ವೆನ್ಸಿ ಡಿವೈಸ್ ದೊರಕಿರುವುದು ಎರಡು ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಪಕ್ಷಿಗಳಿಗೆ ಕಟ್ಟಿದ್ದ ಚೀನಾ ರೇಡಿಯೋ ಫ್ರಿಕ್ವೆನ್ಸಿ ಪತ್ತೆ..!
ವಿವಿಧ ಪ್ರಬೇಧದ ಸಾವಿರಾರು ಪಕ್ಷಿಗಳ ಹಿಂಡು ಬಾಗಲಕೋಟೆ ತಾಲೂಕಿನ ಕಿರಸೂರಿಗೆ ವಲಸೆ ಬಂದಿವೆ. ಆಲಮಟ್ಟಿ ಹಿನ್ನೀರಿನಲ್ಲಿ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ದೇಶ ವಿದೇಶಗಳ ಹಕ್ಕಿಗಳು ವಲಸೆ ಬರುತ್ತವೆ. ಸಂತಾನಾಭಿವೃದ್ಧಿಗಾಗಿ ಎಲ್ಲ ಪಕ್ಷಿಗಳು ಹಿನ್ನೀರನ್ನೇ ಅವಲಂಬಿಸಿರುತ್ತವೆ. ಹಾಗಾಗಿ ಆಲಮಟ್ಟಿ ಡ್ಯಾಂನ ಬಳಿಯ ಕಿರಸೂರಿನ ಗ್ರಾಮದ ಬಳಿ ದೇಶ ವಿದೇಶಗಳ ಸುಮಾರು 50ಕ್ಕೂ ಹೆಚ್ಚು ಪ್ರಬೇಧದ ಹಕ್ಕಿಗಳು ಬಂದು ನೆಲೆಸುತ್ತವೆ. ಇದೇ ವೇಳೆ ಚೀನಾದ ಪಕ್ಷಿ ಸಂಶೋಧಕರು ಬಾರ್ ಹೆಡೆಡ್ ಗೂಸ್ ಎಂಬ ದೇಶಿಯ ಪಕ್ಷಿಗೆ ಈ ಬಾರಿ ರೇಡಿಯೋ ಫ್ರಿಕ್ವೆನ್ಸಿ ಯಂತ್ರ ಕಟ್ಟಿ ಬಿಟ್ಟಿದ್ರು ಎನ್ನಲಾಗಿದೆ.

ರೇಡಿಯೋ ಫ್ರಿಕ್ವೆನ್ಸಿ ಡಿವೈಸ್ ಕಟ್ಟಿದ್ದೇಕೆ..?
ಚೀನಾದ ಚೈನೀಸ್ ಅಕ್ಯಾಡೆಮಿ ಫಾರ್ ಸೈನ್ಸ್ ತಜ್ಞರು ಬಾರ್ ಹೆಡೆಡ್ ಗೂಸ್ ಎಂಬ ಪಕ್ಷಿಗೆ ರೇಡಿಯೋ ಫ್ರಿಕ್ವೆನ್ಸಿ ಕಟ್ಟಿ ಬಿಟ್ಟಿದ್ದಾರೆ. ಪಕ್ಷಿಯ ಹಾರಾಟ, ವಲಸೆ ಹಾಗೂ ಅದರ ಜೀವನ ಕ್ರಮ ತಿಳಿದುಕೊಳ್ಳುವ ಸಲುವಾಗಿ ಈ ರೇಡಿಯೋ ಫ್ರಿಕ್ವೆನ್ಸಿ ಕಟ್ಟಿದ್ದಾರೆ. ಪಕ್ಷಿ ತಜ್ಞರು ಕಟ್ಟಿದ್ದ ರೇಡಿಯೋ ಫ್ರಿಕ್ವೆನ್ಸಿ ಅಲ್ಲಿಯೇ ಬಿದ್ದಿದೆ. ಇದ್ರಿಂದ ಪಕ್ಷಿ ಚೀನಾ ದೇಶದ ಸಂಪರ್ಕ ಕಡಿತಗೊಂಡಿತ್ತು.

ಈ ಬಗ್ಗೆ ಪಕ್ಷಿಗೆ ಕಾಲರ್ ಐಡಿ ಕಟ್ಟಿದ್ದ ಚೀನಾದ ಪಕ್ಷಿ ತಜ್ಞರು ಬೆಂಗಳೂರಿನ ಪಕ್ಷಿ ತಜ್ಞ ಡಾ. ಸುಬ್ರಹ್ಮಣ್ಯ ಅವ್ರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಜುಲೈ 7 ರಂದು ಬಾಗಲಕೋಟೆಗೆ ಬಂದ ಸುಬ್ರಹ್ಮಣ್ಯ ಅವ್ರು ಬಾಗಲಕೋಟೆ ಜಿಲ್ಲೆ ಅರಣ್ಯ ಇಲಾಖೆ ಸಹಾಯದಿಂದ ಬಾರ್ ಹೆಡೆಡ್ ಗೂಸ್‌ಗೆ ಕಟ್ಟಿದ್ದ ಕಾಲರ್ ಐಡಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಪತ್ತೆ ಹಚ್ಚಿದ್ದ ಕಾಲರ್ ಐಡಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ವನ್ಯಜೀವಿ ಇಲಾಖೆಗೆ ಎರಡು ತಿಂಗಳ ಹಿಂದೆ ಕಳುಹಿಸಿ ಕೊಟ್ಟಿದ್ದು, ಪಕ್ಷಿ ಪತ್ತೆಯಾಗಿಲ್ಲ ಎನ್ನಲಾಗಿದೆ.

ವಿಶೇಷ ವರದಿ: ಕೃಷ್ಣ, ಬಾಗಲಕೋಟೆ

Leave a Reply

Your email address will not be published. Required fields are marked *