ಹಾಸನಾಂಭೇ ದರ್ಶನಕ್ಕೆ ಭಕ್ತಸಾಗರ, ದೇವಿ ವಿಶೇಷತೆ..

ಹಾಸನದ ಅಧಿದೇವತೆ ಹಾಸನಾಂಬೆಯ ಅಪಾರ ಮಹಿಮೆಯಲ್ಲಿ ನಂಬಿಕೆ ಇರುವ ಭಕ್ತರಿಗೆ ವರ್ಷದಲ್ಲಿ ಒಂದೇ ಬಾರಿ ದರ್ಶನ ನೀಡುವುದರಿಂದ 12 ದಿನಗಳು ದೇವಿಯ ದೇಗುಲದಲ್ಲಿ ಜನಜಾತ್ರೆ ನೆರೆದಿರುತ್ತದೆ. ಅ.17 ರಿಂದ 29ರ ವರೆಗೆ ಹಾಸನಾಂಬೆ ದರ್ಶನ ನೀಡಲಿದ್ದು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಳು ಎಂಬ ಬಲವಾದ ನಂಬಿಕೆ ಇರುವಂತೆ ಪ್ರತಿ ವರ್ಷ 12 ದಿನ ಮಾತ್ರ ದರ್ಶನ ನೀಡುವ ಪ್ರತೀತಿ ಹೊಂದಿರುವ ಹಾಸನಾಂಬ ದೇವಿ ನಾಡಿನಲ್ಲೇ ವಿಶೇಷ ಎನ್ನಬಹುದು.

ಹಾಸನಾಂಬ ಇತಿಹಾಸ: ಜನನಿ ಜನ್ಮ ಭೂಮಿಶ್ಚ ಸ್ವರ್ಗಾದವೆ ಗರೀಯಸಿ- ಅಂದರೆ ಜನನಿ ಮಾತೆ ಹಾಗೂ ಜನ್ಮ ಭೂಮಿ ಇರುವೆಡೆ ಸ್ವರ್ಗವಿದೆ ಎಂದರ್ಥ. ಈ ಭರತಖಂಡದಲ್ಲಿ ಕೋಟ್ಯಾನುಕೋಟಿ ದೇವತೆಗಳಿದ್ದರೂ ಮಾತೃತ್ವದ ಸಂಕೇತವಾದ ಹಾಸನಾಂಬ ದೇವಿ ಪ್ರತಿವರ್ಷ ದೇಗುಲದಲ್ಲಿ ದರ್ಶನ ನೀಡುತ್ತಿದ್ದಾಳೆ.

ನಗರದ ಅನುಪಮ ಪ್ರಭಾವದ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಹಾಸನ ನಗರದ ಗ್ರಾಮದೇವತೆ ಹಾಸನಾಂಬ ದೇವಿಯ ದೇಗುಲ ಸುಮಾರು 12ನೆ ಶತಮಾನದಲ್ಲಿ ಕೃಷ್ಣಪ್ಪನಾಯಕನೆಂಬ ಪಾಳೇಗಾರನ ಕಾಲದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯದಲ್ಲಿ ಹಾಸನಾಂಬೆ ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ.

ಸುಂದರ ಶಿಲ್ಪ ಕಲೆಗಳಿಗೆ ಹೆಸರಾದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಗಳನ್ನು ಒಳಗೊಂಡಿರುವ ಜಿಲ್ಲೆಯ ಈ ದೇವಾಲಯದಲ್ಲಿ ವಿಶೇಷವಾದ ಶಿಲ್ಪಕಲಾ ವೈಭವವೇನೂ ಇಲ್ಲದಿದ್ದರೂ ದೇವಿಯ ಆರಾಧಕರು ನೂರಾರು ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸುತ್ತಾರೆ.ಪ್ರತಿ ವರ್ಷ ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಎದುರು ಇಡುವ ನೈವೇದ್ಯವು ಮತ್ತೆ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆರೆದಾಗ ತಾಜಾ ಆಗಿ ಹಾಗೂ ದೇವರ ಎದುರಿನಲ್ಲಿರುವ ದೀಪವು ವರ್ಷವಿಡಿ ಉರಿಯುತ್ತಲೇ ಇರುತ್ತದೆ ಎಂಬ ವಾಡಿಕೆ ಇದೆ.

ಹೊಯ್ಸಳರ ಕಾಲದ ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಬೇರೆ ದೇವರಂತೆ ಹಾಸನಾಂಬ ದೇವಿಯನ್ನು ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೂಮ್ಮೆ ಆಶ್ವೀಜಮಾಸ ಪೂರ್ಣಿಮೆ ನಂತರ ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೆ ದಿನ ಬಾಗಿಲು ಮುಚ್ಚುವುದು ರೂಢಿ. ಪುನಃ ಒಂದು ವರ್ಷ ಕಾಲ ದೇವಿಯ ದರ್ಶನ ಸಿಗುವುದಿಲ್ಲ.

ದೇಗುಲದ ಬಾಗಿಲು ತೆರೆದೊಡನೆ ದೇವಿಯದರ್ಶನ ಶುಭಕರವಲ್ಲ ಎಂಬ ಕಾರಣಕ್ಕೆ ದೃಷ್ಟಿ ನಿವಾರಣೆಗಾಗಿ ಮೈಸೂರು ಅರಸ ವಂಶದ ನರಸಿಂಹ ರಾಜ ಅರಸು ಅವರು ಬನ್ನಿಗಿಡವನ್ನು ಕತ್ತಿಯಿಂದ ಕಡಿದ ಸಮಯದಲ್ಲಿ ದೇಗುಲದ ಬಾಗಿಲು ತೆರೆಯಲಾಗುವುದು. ಭಕ್ತಾದಿಗಳು ಅದನ್ನು ನೋಡಿ ನಂತರ ದೇವಿಯ ದರ್ಶನ ಪಡೆಯುತ್ತಾರೆ.ಹಾಸನದ ಹಿನ್ನೆಲೆಯುಳ್ಳವರು ರಾಜ್ಯದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಈ ಸಮಯದಲ್ಲಿ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಈ ಬಾರಿ 17ರಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ವಿಧಿ-ವಿಧಾನ, ಮಂಗಳವಾದ್ಯಗಳ ಉದ್ಘೋಷದೊಂದಿಗೆ ಹಾಸನಾಂಬೆ ದೇಗುಲದ ದ್ವಾರವನ್ನು ನಗರದ ಪ್ರಮುಖರ ಉಪಸ್ಥಿತಿಯಲ್ಲಿ ತೆರೆಯಲಾಗಿದೆ.

ಈ ಸಮಯದಲ್ಲಿ ಗರ್ಭಗುಡಿ ಮುಂದೆ ಅರಸು ಮನೆತನದವರಿಂದ ನೆಟ್ಟ ಬಾಳೆಕಂದನ್ನು1996ರಿಂದ ಈ ಕಾರ್ಯ ನಡೆಸುತ್ತಿರುವ ನರಸಿಂಹರಾಜ ಅರಸರವರು ದೇವಿಯನ್ನು ಭಜಿಸುತ್ತ ಒಂದೆ ಏಟಿನಲ್ಲಿ ಬಾಳೆಕಂದನ್ನು ಕತ್ತರಿಸುವರು.ಅ.29ರಂದು ದೇಗುಲದ ಬಾಗಿಲು ಮುಚ್ಚಲಾಗುವುದು. ಮತ್ತೆ ಮುಂದಿನ ವರ್ಷ ಇದೇ ಸಮಯದಲ್ಲಿ ತೆರೆಯಲಾಗುವುದು.

ಐತಿಹಾಸಿಕವಾಗಿ ಹಾಸನವೆಂಬ ಉಲ್ಲೇಖ 12ನೆ ಶತಮಾನದಲ್ಲಿ ಕೃಷ್ಣಪ್ಪನಾಯಕನೆಂಬ ಪಾಳೇಗಾರನು ದೇವಾಲಯ ಕಟ್ಟಿದ ಬಗ್ಗೆ ಹಾಸನ ತಾಲ್ಲೂಕಿನ ಕುದರಗುಂಡಿ ಎಂಬ ಗ್ರಾಮದಲ್ಲಿ ಕ್ರಿ.ಶ.1140ರಲ್ಲಿ ಸ್ಥಾಪಿತವಾದ ವೀರಗಲ್ಲಿನ ಶಿಲಾಶಾಸನದಲ್ಲಿ ಕಂಡು ಬರುತ್ತದೆ. ಹಾಸನಾಂಬ ದೇವಿ ಹೆಸರಿನಿಂದಲೇ ನಗರಕ್ಕೆ ಹಾಸನವೆಂದು ನಾಮಕರಣವಾಗಿದೆ. ಸ್ಥಳ ಪುರಾಣದ ಪ್ರಕಾರ ಸಪ್ತಮಾತೆಯರಾದ ವೈಷ್ಣವಿ, ಇಂದ್ರಾಣಿ, ಮಹೇಶ್ವರಿ, ಕುಮಾರಿ, ಬ್ರಾಹ್ಮಿದೇವಿ, ವರಾಹಿ ಮತ್ತು ಚಾಮುಂಡಿದೇವಿಯರು ವಾಯುವಿಹಾರಕ್ಕಾಗಿ ವಿಹರಿಸುದ್ದಾಗ ಈ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆಸಲು ನಿರ್ಧರಿಸಿದರು.

ಅವರುಗಳಲ್ಲಿ ವೈಷ್ಣವಿ, ಮಹೇಶ್ವರಿ, ಕುಮಾರಿಯರು ಈಗಿನ ಹಾಸನಾಂಬ ದೇಗುಲದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರು. ಬ್ರಾಹ್ಮಿದೇವಿಯು ಸಮೀಪದ ಕೆಂಚಮ್ಮನ ಹೊಸಕೋಟೆಯಲ್ಲಿ ಹಾಗೂ ಇಂದ್ರಾಣಿ, ವರಾಹಿ ಮತ್ತು ಚಾಮುಂಡಿ ದೇವಿಯರು ಹಾಸನ ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು ಎಂದು ಹೇಳಲಾಗಿದೆ. ಮಹಾಭಾರತ ಕಾಲದಲ್ಲಿ ಈ ಸ್ಥಳಕ್ಕೆ ಜನಮೇಜಯ ರಾಜನ ಆಳ್ವಿಕೆಯ ಸಿಂಹಾಸನಪುರಿಯೆಂದು ಹೆಸರಿದ್ದು, ಹಾಸನಾಂಬೆ ಇಲ್ಲಿ ನೆಲೆಸಿದ ನಂತರ ಹಾಸನವೆಂದು ಆಗಿದೆ ಎಂದು ಹೇಳಲಾಗುತ್ತದೆ. ದೇಗುಲದ ಗರ್ಭಗುಡಿಯಲ್ಲಿ ದೇವಿಯ ವಿಗ್ರಹದ ಎದುರು ಒಂದು ಪುಟ್ಟ ಕಲ್ಲು ಇದೆ. ಅದನ್ನು ಸೊಸೆ ಕಲ್ಲು ಎನ್ನುತ್ತಾರೆ. ಅದಕ್ಕೊಂದು ವಿಶೇಷ ಕಥೆಯಿದೆ.

ಪ್ರತಿನಿತ್ಯ ಸೊಸೆಗೆ ಕಿರುಕುಳ ನೀಡುತ್ತಿದ್ದ ಅತ್ತೆ ಒಂದು ದಿನ ಸೊಸೆಯನ್ನು ಹಿಂಬಾಲಿಸಿ ಬಂದು ದೇವಿಯ ಧ್ಯಾನದಲ್ಲಿ ಮಗ್ನಳಾಗಿದ್ದ ಸೊಸೆಯನ್ನು ಕಂಡು ಸಿಟ್ಟಿನಿಂದ ಮನೆ ಕೆಲಸಕ್ಕಿಂತ ದೇವಿ ದರ್ಶನ ನಿನಗೆ ಹೆಚ್ಚಾಯಿತೇ ಎಂದು ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದುಕೊಂಡು ತಲೆಗೆ ಕುಕ್ಕಿದಾಗ ಆ ನೋವನ್ನು ತಾಳಲಾರದೆ ಅಮ್ಮಾ ಹಾಸನಾಂಬೆ ತಾಯೆ ಕಾಪಾಡು ಎಂದು ಭಕ್ತಿಯಿಂದ ಆರ್ತನಾದ ಮಾಡಿದಾಗ ಕರುಣಾಮಯಿಯಾದ ಮಾತೃ ಹೃದಯದ ದೇವಿಯು ಸೊಸೆಯ ಭಕ್ತಿಗೆ ಮೆಚ್ಚಿ ಯಾವಾಗಲು ನೀನು ನನ್ನ ಸನ್ನಿಧಾನದಲ್ಲೇ ನೆಲೆಸು ಎಂಬ ವರ ನೀಡಿದಳಂತೆ.

ಆಗ ಸೊಸೆ ಅಲ್ಲೇ ಕರಗಿ ನೆಲೆಸಿದಳೆಂದು, ಪ್ರತೀ ವರ್ಷವು ಒಂದು ಭತ್ತದ ಕಾಳಿನಷ್ಟು ದೇವಿಯ ವಿಗ್ರಹದ ಕಡೆ ಚಲಿಸುವಳೆಂದು, ದೇವಿ ಪಾದ ತಲುಪಿದ ಕ್ಷಣವೇ ಕಲಿಯುಗ ಅಂತ್ಯ ಎನ್ನುವ ವಾಡಿಕೆಯಿದೆ. ದೇಗುಲಕ್ಕೆ ಆಭರಣಗಳನ್ನು ಕದಿಯಲು ಬಂದ ನಾಲ್ವರು ಕಳ್ಳರಿಗೆ ದೇವಿ ಶಾಪ ನೀಡಿದಾಗ ಅವರು ಕಲ್ಲಾ ದರು. ಈ ಗುಡಿಯನ್ನು ಕಳ್ಳಪ್ಪನ ಗುಡಿ ಎನ್ನುತ್ತಾರೆ. ಹಾಸನಾಂಬ ದೇವಿಯ ದೇವಾಲಯವನ್ನುಪ್ರವೇಶಿಸಿದ ತಕ್ಷಣ ಕಾಣುವುದು ಸಿದ್ದೇಶ್ವರ ಸ್ವಾಮಿಯ ದೇಗುಲ. ಸಾಮಾನ್ಯವಾಗಿ ಶಿವನರೂಪವಾದ ಸಿದ್ದೇಶ್ವರ ಸ್ವಾಮಿಯು ಲಿಂಗರೂಪದಲ್ಲಿ ಇರುತ್ತದೆ. ಆದರೆ, ಇಲ್ಲಿ ವಿನೂತನವಾದ ಉದ್ಭವಮೂರ್ತಿಯು ಅರ್ಜುನನಿಗೆ ಪಾಶುಪತಾಸ್ತ್ರ ನೀಡುತ್ತಿರುವ ಆಕಾರದಲ್ಲಿ ಒಡಮೂಡಿದೆ. ಇಲ್ಲಿನ ವಿಶೇಷವೇನೆಂದರೆ ಗಂಗೆಯು ಉದ್ಭವ ಮೂರ್ತಿಯ ಹಣೆಯ ಮೇಲೆ ಜಿನುಗುವ ರೂಪದಲ್ಲಿ ಪ್ರತಿನಿತ್ಯ ಕಾಣಬಹುದು.

ದೀಪಾವಳಿಯ ಮೊದಲ ದಿನ ದೇವಿಕೆರೆಯಲ್ಲಿ ಸಿದ್ದೇಶ್ವರ ಸ್ವಾಮಿಯ ತೆಪ್ಪೋತ್ಸವ, ಎರಡನೆದಿನ ಬಸವೇಶ್ವರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಪ್ರತಿವರ್ಷವೂ ಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿಯ ರಥೋತ್ಸವವಿರುತ್ತದೆ. ಅಮಾವಾಸ್ಯೆಯಂದು ಅಂದರೆ ನರಕ ಚತುರ್ದಶಿಯಂದು ಸಿದ್ದೇಶ್ವರ ಸ್ವಾಮಿ ರಾವಣೋತ್ಸವವು ನಗರದ ಮುಖ್ಯ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕೃತಗೊಂಡು ವಿಜೃಂಭಣೆಯಿಂದ ಸಂಚರಿಸುತ್ತದೆ.

ಇದರ ಪ್ರಮುಖ ಆಕರ್ಷಣೆಯೆಂದರೆ ಈಶ್ವರನು ರಾವಣನ ಹೆಗಲಮೇಲೆ ಸಂಚರಿಸುವುದು. ಕೊನೆಯದಿನ ಮುಂಜಾನೆಯ ಚುಮುಚುಮು ಚಳಿಯಲ್ಲಿ ಸಿದ್ದೇಶ್ವರ ಸ್ವಾಮಿಯ ಕೆಂಡೋತ್ಸವ ಹಾಗೂ ವಿಶ್ವರೂಪ ದರ್ಶನ ಇರುತ್ತದೆ. ಆಕರ್ಷಕವಾದ ಪಟಾಕಿ ಬಾಣ- ಬಿರುಸುಗಳ ಪ್ರದರ್ಶನದಿಂದ ಆಕಾಶದಲ್ಲಿ ಮೂಡುವ ಬಣ್ಣಬಣ್ಣದ ಚಿತ್ತಾರಗಳು ನೋಡುಗರ ಮನಸೆಳೆಯುತ್ತದೆ.

Leave a Reply

Your email address will not be published. Required fields are marked *