ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಷಯ

ನೆನ್ನೆ ಇವತ್ತು ನಮ್ಮ ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಷಯ, ಈ ಮಟ್ಟಕ್ಕೆ ರೈತರ ನೋವಿನ ವಿಷಯವನ್ನ ಮುಟ್ಟಿಸಲು ಹಾಕಿದ ಶ್ರಮ ಅಷ್ಟಿಷ್ಟಲ್ಲ. ಹಿಡುವಳಿದಾರರ, ರೈತ ಕುಟುಂಬಗಳ ಹಕ್ಕನ್ನ ಕಸಿದುಕೊಳ್ಳುವ ಪ್ರಯತ್ನಕ್ಕೆ ನಮ್ಮ ಆಕ್ಷೇಪಣೆ. ಭಂಡಿಗಡಿ ಗ್ರಾಮದ 500 ರಕ್ಕೂ ಹೆಚ್ಚಿನ ರೈತರ ನೋವುಗಳನ್ನ ಆಕ್ಷೇಪಣ ಪತ್ರದ ಮೂಲಕ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳಿಗೆ ತಲುಪಿಸಿದ್ದೇವೆ. 50 ಕ್ಕೂ ಹೆಚ್ಚು ರೈತರು ಚಿಕ್ಕಮಗಳೂರಿನತ್ತ ಬಸ್ಸಿನಲ್ಲಿ ಸಾಗಿ ನಮ್ಮ ನೋವು, ನಮ್ಮ ಜಾಗಗಳ ಮೇಲಿನ ಒಡನಾಟ, ಆ ಜಾಗಗಳನ್ನ ಬಿಟ್ಟರೆ ಆಗುವ ಸಂಕಟಗಳನ್ನ A C ಅವರ ಗಮನಕ್ಕೆ ತಂದಿದ್ದೇವೆ. ಸಾಲು ಸಾಲು ಅಣೆಕಟ್ಟುಗಳ ನಿರ್ಮಾಣದ ಮೂಲಕ, ಏಕಜಾತಿಯ ನೆಡುತೋಪುಗಳ ಮಾಡುವ ಮೂಲಕ ಸಾವಿರಾರು ಹೆಕ್ಟೆರ್ ನೈಸರ್ಗಿಕ ಅರಣ್ಯ ಪ್ರದೇಶಕ್ಕೆ ಕೊಡಲಿಯಿಟ್ಟ ಸರ್ಕಾರ ಈಗ ಸಣ್ಣ ಹಿಡುವಳಿದಾರರ ಐದು ಹತ್ತು ಗುಂಟೆಗಳ ಮೇಲು ಕಣ್ಣಿಟ್ಟು ಕೂತಿದೆ. ಸಂರಕ್ಷಿತ ಅರಣ್ಯ ಹುಲಿ ಯೋಜ ಸಾಲು ಸಾಲು ಯೋಜನೆಗಳ ಮೂಲಕ ರೈತ ಕುಟುಂಬಗಳನ್ನ ಒಕ್ಕಲೆಬ್ಬಿಸಲು ಹೊರಟಿರುವ ರೀತಿ ನಿಲ್ಲಲೇಬೇಕಿದೆ. ಕೆರೆಕಟ್ಟೆ ಭಾಗದಲ್ಲಿ ಮನೆ ಜಮೀನು ಬಿಟ್ಟು ಬಂದವರು, ಮುಳುಗಡೆ ಪ್ರದೇಶದವರನ್ನ ಮತ್ತೆ ಮತ್ತೆ ನಿರಾಶ್ರಿತರನ್ನಾಗಿ ಮಾಡುವ ಸರ್ಕಾರದ ಯೋಜನೆಗಳು ರೈತ ಪರವಾಗಿ ಚಿಂತಿಸಿದರೆ ಉತ್ತಮ. ಸೆಕ್ಷನ್ 4(1) ರಲ್ಲಿರುವ ಪ್ರಸ್ತಾಪಿತ ಅರಣ್ಯವನ್ನ ಸೆಕ್ಷನ್ 17 ರಡಿ ಘೋಷಿತ ಮೀಸಲು ಅರಣ್ಯ ಮಾಡುವ ಪ್ರಕ್ರಿಯೆಗೆ ನಮ್ಮ ಆಕ್ಷೇಪ. ಅರಣ್ಯ ಉಳಿಸಲು ಸೆಕ್ಷನ್ಗಳ ಹೇರುವ ಅವಶ್ಯಕತೆಯಿಲ್ಲ. ಸುತ್ತ ಮುತ್ತಲಿನ ಪರಿಸರವನ್ನ ಉಳಿಸಿಕೊಂಡು ಬಂದವರನ್ನೆ ಇಂದು ಪರಿಸರ ವಿರೋಧಿಗಳನ್ನಾಗಿ ನೋಡುವ ಭಾವನೆ ನಿಲ್ಲಬೇಕಿದೆ. ಒಟ್ಟಿನಲ್ಲಿ ಪರಿಸರ ಉಳಿಯಲಿ ಆದರೆ ಮಲೆನಾಡ ನೆಲವಾಸಿಗಳನ್ನ ನರಕವಾಸಿಗಳನ್ನಾಗಿ ಮಾಡದಿರಲಿ.
-ದಿಗಂತ್ ಬಿಂಬೈಲ್

Leave a Reply

Your email address will not be published. Required fields are marked *