ಕೊಡಚಾದ್ರಿ

ಕೊಡಚಾದ್ರಿ ಎನ್ನುವುದು ಚಿಕ್ಕಂದಿನಿಂದಲೂ ಕುತೂಹಲ ಹುಟ್ಟಿಸುವ ಹೆಸರಾಗಿತ್ತು ನಮಗೆ.ನಮ್ಮಮ್ಮನ ಮನೆ ಅದಕ್ಕೆಹತ್ತಿರವಾಗಿರುವುದೇ ಇದಕ್ಕೆ ಕಾರಣ. ಸಖತ್ ಎತ್ರ ಇದೆ,ನಾವೆಲ್ಲ ಮನೆಯಿಂದ್ಲೇ ನಡ್ಕಂಡ್ಹೋಗಿದ್ವಿ ಬೆಳಿಗ್ಗೆಹೊರಟ್ರೆ ವಾಪಸ್ ಬರದು ರಾತ್ರಿ ಆಗ್ತಿತ್ತು ಅಂತೆಲ್ಲ ಅಮ್ಮಹೇಳ್ತಿದ್ರೆ ಕೊಡಚಾದ್ರಿಅನೋದು ಮೌಂಟೆವರೆಸ್ಟಿಗಿಂತ್ಲೂ ನಿಗೂಢ ಎನಿಸಿಬಿಟ್ಟಿತ್ತಾಗ. ಒಮ್ಮೆ ಕೊಲ್ಲೂರಿಗೆ ಹೋದಾಗ ಅಲ್ಲಿಂದ ಕಾಣುವ ಆ ಬೆಟ್ಟವನ್ನುತೋರಿಸಿದ ನನ್ನ ಚಿಕ್ಕಮ್ಮ ಅದೇ ಕೊಡಚಾದ್ರಿ ಎಂದಾಗಲೇ ಕೊಡಚಾದ್ರಿಗೆ ಹೋಗಬೇಕೆನ್ನುವ ಬಲವಾದ ಆಸೆಯೊಂದು ಮನದಲ್ಲಿ ಹುಟ್ಟಿಕೊಂಡಿತ್ತಾದರೂ ಈಗಿನಂತೆ ಪ್ರಯಾಣದ ಸೌಕರ್ಯಗಳೂ,ಕುಟುಂಬದ ಜತೆ ಹೋಗುವ ರೂಢಿಗಳೂ ಕಡಿಮೆಯಿದ್ದ ಕಾಲದಲ್ಲಿ ಕೊಡಚಾದ್ರಿಯೂ ನಮಗೆ ಮರೀಚಿಕೆಯಾಗಿಯೇ ಉಳಿದಿತ್ತು . ಕೊನೆಗೂ ಪಿಯುಸಿಗೆ ಹೋಗುತ್ತಿದ್ದ ಸಮಯದಲ್ಲೊಮ್ಮೆ ಸ್ನೇಹಿತರ ಜತೆ ಬಸ್ಸಿನಲ್ಲಿ ಕಾರೆಘಟ್ಟದಲ್ಲಿಳಿದು ಕಡಿದಾದ ದಾರಿ ಕ್ರಮಿಸಿ ಕೊಡಚಾದ್ರಿಯನ್ನು ಹತ್ತಿದಾಗ ತನ್ನ ಸೌಂದರ್ಯದಿಂದ ಮನಸೆಳೆದ ಕೊಡಚಾದ್ರಿ ಹಾಕಿದ ಮೋಡಿಯಿಂದ ಇನ್ನೂ ಹೊರಬರಲಾಗಿಲ್ಲ
ನಮಗೆ.
ಶಿವಮೊಗ್ಗದಿಂದ ಕೊಲ್ಲೂರಿಗೆ ಹೋಗುವ ಮಾರ್ಗದಲ್ಲಿ ಕೊಡಚಾದ್ರಿಗೆ ಎರಡು ಮಾರ್ಗಗಳಿವೆ, ಒಂದು ಸಂಪೆಕಟ್ಟೆಯಿಂದ ಕೊಡಚಾದ್ರಿಯ ಬುಡಕ್ಕೆ ಹೋಗಿ ಅಲ್ಲಿಇಂದ ಮೇಲೇರುತ್ತದೆ.ಇದರಲ್ಲಿ ಬೆಟ್ಟದ ಬುಡಕ್ಕೆ ವಾಹನದಲ್ಲಿ ಹೋಗಿ ಅಲ್ಲಿಂದ ಅಲ್ಲಿರುವ ಬಾಡಿಗೆ ಜೀಪುಗಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಕ್ರಮಿಸಬಹುದು.ಇನ್ನೊಂದು ಸ್ವಲ್ಪ ಮುಂದೆ ಕಾರೆಘಟ್ಟ ಎಂಬಲ್ಲಿಂದ ಹೋಗುವ ಸ್ವಲ್ಪ ಹತ್ತಿರದ ಕಾಲ್ನಡಿಗೆಯ ದಾರಿ,ಇದು ಸ್ವಲ್ಪ ಕಡಿದಾದುದು. ಇದರಲ್ಲಿ ಹೋದರೆ ಬೆಟ್ಟದ ಒಂದೇ ಮಗ್ಗುಲು ಕಾಣುವುದು ಜಾಸ್ತಿ. ಹಾಗಾಗಿ ನಾವು ಸಂಪೇಕಟ್ಟೆಯಿಂದ ಜೀಪಿನ ಮಾರ್ಗದಲ್ಲೇ ಹೋಗಿ ಬೆಟ್ಟದ ಬುಡದಲ್ಲಿ ಬೈಕುಗಳನ್ನು ನಿಲ್ಲಿಸಿ ನಡೆಯುವುದೇ ಜಾಸ್ತಿ. ಹತ್ತಲು ಶುರುವಾದಂತೆಲ್ಲ ಕೊಡಚಾದ್ರಿಯು ವಿವಿಧ ಹಂತಗಳಲ್ಲಿ ತನ್ನ ಸೌಂದರ್ಯವನ್ನು ಅನಾವರಣಗೊಳಿಸುತ್ತಾ ಸಾಗುತ್ತದೆ. ಒಂದು ಹಂತದಲ್ಲಿ ಒಂದು ಮಗ್ಗುಲಿನ ನೋಟ ಕಂಡರೆ ಮತ್ತೊಂದೆರಡು ತಿರುವುಗಳನ್ನು ಕ್ರಮಿಸಿದಾಗ ಮತ್ತೊಂದು ಪಾರ್ಶ್ವದ ನೋಟ ಕಾಣುವುದು!ಮುಕ್ಕಾಲುಭಾಗ ಹತ್ತಿದಾಗ ಒಂದುಬದಿ ಶರಾವತಿ ಹಿನ್ನೀರಿನ ನೋಟ ಸಿಕ್ಕಿದರೆ ಮತ್ತೊಂದು ಬದಿ ಚಕ್ರಾ,ಸಾವೆಹಕ್ಲು ಹಾಗೂ ಒಂದು ಭಾಗದ ಕರಾವಳಿಯ ಬುಡದ ನೋಟ ಅತ್ಯಂತ ಸುಂದರ.ಇಲ್ಲೂ ಪೂರ್ತಿ ನೋಟ ಬಿಟ್ಟುಕೊಡದೇ ಒಂದು ಭಾಗಕ್ಕೆ ಕೊಡಚಾದ್ರಿಯ ಮುಖ್ಯ ಶಿಖರವೇ ಅಡ್ಡವಾಗಿಬಿಡುತ್ತದೆ.ಚಾರಣದ ಅಭ್ಯಾಸವಿಲ್ಲದವರು ಕೈಕಾಲು ಸೋಲುವುದೂ ಇದೇ ಜಾಗದಲ್ಲಿಯೇ.ಮುಂದೆ ಹತ್ತಬೇಕಾಗಿರುವ ಭಾಗವನ್ನು ನೋಡಿದರೆ ಅಂತವರಿಗೆ ಇದ್ದ ಉತ್ಸಾಹವೂ ಕುಗ್ಗುವಂತೆ ಕೊಡಚಾದ್ರಿಯ ಉನ್ನತ ಶಿಖರ ಸವಾಲೊಡ್ಡುತ್ತದೆ‌.ಇದರ ಜತೆ ಆ ಕೊರಕಲು ದಾರಿಯಲ್ಲಿ ಜೀಪುಗಳನ್ನು ಓಡಿಸುವ ರೀತಿ ಮೈ ಜುಮ್ಮೆನಿಸುತ್ತದೆ.
ಇಲ್ಲಿಂದ ಸ್ವಲ್ಪ ಮೇಲೆ ಕ್ರಮಿಸಿದರೆ ಆದಿ ಮೂಕಾಂಬಿಕಾ ದೇವಾಲಯ ಸಿಗುತ್ತದೆ.ಇಲ್ಲಿಂಂದ ಮುಂದೆ ಜೀಪುಗಳೂ ಹೋಗುವುದಿಲ್ಲ. ಬೆಟ್ಟದ ತುದಿಯ ಸರ್ವಜ್ಞ ಪೀಠಕ್ಕೆ ಸುಮಾರು ಎರಡೂವರೆ ಕಿಮೀ ದೂರದ ಕಡಿದಾದ ಹಾದಿ ಇಲ್ಲಿಂದಲೇ ಶುರುವಾಗುತ್ತದೆ.ಸ್ವಲ್ಪ ಮೇಲೆ ಹತ್ತಿದೊಡನೆ ಕರಾವಳಿಯ ವಿಶಾಲ ನೋಟ ಕಣ್ಸೆಳೆಯುತ್ತದೆ. ಕಡಿದಾದ ಗುಡ್ಡದಂಚಿನಲ್ಲಿ ಒಬ್ಬಿಬ್ಬರು ಮಾತ್ರ ಹೋಗುವಷ್ಟು ಸಣ್ಣ ಹಾದಿ. ಆಯ ತಪ್ಪಿದರೆ ನೇರ ಸಾವಿರಾರು ಅಡಿ ಪ್ರಪಾತ. ಆ ಹೆದರಿಕೆಯಲ್ಲೂ ತಪ್ಪಿಸಿಕೊಳ್ಳಲಾಗದ ದೃಶ್ಯ ಸೌಂದರ್ಯ!ಇಲ್ಲೂ ಮತ್ತೊಂದು ಬದಿಯ ನೋಟವನ್ನು ಬಿಟ್ಟುಕೊಡದೇ ಅಡ್ಡವಾಗುತ್ತದೆ ಗುಡ್ಡ. ಇದನ್ನು ಕ್ರಮಿಸಿ ಸರ್ವಜ್ಞ ಪೀಠವನ್ನು ತಲುಪಿದರೆ ಆಹಾ! ಆ ಸೌಂದರ್ಯಕ್ಕೆ ಸಾಟಿಯೆಲ್ಲಿ! ಸುತ್ತ ಎತ್ತ ನೋಡಿದರತ್ತ ಕಣ್ಸೆಳೆಯುವ ನೋಟಗಳು, ಒಂದು ಬದಿ ಶರಾವತಿ ಹಿನ್ನೀರಿನ ವಿಶಾಲ ಹರವು, ಅದನ್ನು ದಾಟಿದರೆ ಚಕ್ರಾ,ಸಾವೆಹಕ್ಲು ಹಿನ್ನೀರು,ಪಶ್ಚಿಮ ಘಟ್ಟಗಳ ಸಾಲು, ಅದರ ಬುಡದಿಂದ ಕರಾವಳಿ ಬಯಲು, ನೇರ ಕೆಳಗೆ ಮಧೂರು ಅದರ ನಂತರ ಕೊಲ್ಲೂರಿನ ನೋಟ ಅದರಾಚೆ ಮತ್ತೆ ಘಟ್ಟಸಾಲುಗಳನ್ನು ದಾಟಿ ಮತ್ತೆ ಶರಾವತಿ ಹಿನ್ನೀರಿನ ತನಕ
ಪೂರ್ತಿ 360° ಯ ನೋಟಕ್ಕೆ ಫಿದಾ ಆಗದವರೇ ಇಲ್ಲವೇನೋ!! ಸೂರ್ಯೋದಯ ಸೂರ್ಯಾಸ್ತಗಳಂತೂ ಅನಿರ್ವಚನೀಯವೇ ಸರಿ. ನಸುಕಿನಲ್ಲೆದ್ದು ನೋಡಿದರೆ ಸುತ್ತ ಹರಡಿರುವ ಮೋಡಗಳು ಕ್ಷೀರಸಾಗರದ ಮಧ್ಯೆಯಿರುವಂತನಿಸಿದರೆ ಸೂರ್ಯಾಸ್ತದ ಸಮಯದಲ್ಲಿ ಬಾನಿಗೆ ರಂಗಿನೋಕುಳಿ ಎರಚಿ ಕಡಲಲಿ ಮುಳುಗುವ ಭಾಸ್ಕರ ಜಗವೆಲ್ಲವನ್ನೂ ಹೊಂಗಿರಣಗಳಲ್ಲಿ ಮುಳುಗಿಸಿ ತಾನೂ ಮುಳುಗುವ ಪರಿ ಅಸಾದೃಶ!!

ಕುತೂಹಲವಿರುವವರು ಇಲ್ಲಿಂದ ಇನ್ನೂ ಕೆಳಗಿಳಿದು ಸೌಪರ್ಣಿಕೆಯ ಉಗಮವಾದ ಚಿತ್ರಮೂಲ ಎಂಬಲ್ಲಿಗೆ ಹೋಗಿಬರಬಹುದು. ಇದಲ್ಲದೇ  ಕೊಡಚಾದ್ರಿಯ ಸುತ್ತಮುತ್ತ ಹಿಡ್ಲುಮನೆ,ಅರಿಷಿನ ಗುಂಡಿ ಮುಂತಾದ ಜಲಪಾತಗಳು ಪ್ರೇಕ್ಷಣೀಯ ಸ್ಥಳಗಳೂ ಬೇಕಾದಷ್ಟಿವೆ.ನಾನು ಕೊಡಚಾದ್ರಿಯನ್ನು ಹತ್ತಲು ಪ್ರಾರಂಭಿಸಿದ ಸ್ವಲ್ಪ ಸಮಯಕ್ಕೇ ನನ್ನ ಮಾವನ ಮಗನೂ ಕಾಲೇಜು ಮುಗಿಸಿದವನು ಕೃಷಿಯಲ್ಲೇ ಮುಂದುವರಿಯುವ ನಿರ್ಧಾರ ಕೈಗೊಂಡಾಗ ನಮ್ಮ ಚಾರಣದ ಉತ್ಸಾಹಕ್ಕೆ ರೆಕ್ಕೆ ಬಂದಿದ್ದು ಹೌದು. ನಾನು ನನ್ನ ತಮ್ಮ ಹಾಗೂ ಮಾವನ ಮಗ ನಾಗರಾಜ ಮೂವರೇ ಕೊಡಚಾದ್ರಿ ಹಾಗೂ ಚಕ್ರಾ ಕಣಿವೆಗಳನ್ನೆಲ್ಲ ಸಾಕಷ್ಟು ಜಾಲಾಡಿದೆವು.ಕೆಲವೊಮ್ಮೆ ಇದಕ್ಕೆ ಬೆಂಗಳೂರಿಂದ ಬರುವ ನಮ್ಮ ತಮ್ಮತಂಗಿಯಂದಿರ ಜತೆಯೂ ಇರುತ್ತಿತ್ತು.  ಸಾಕಷ್ಟು ರೋಚಕ ಘಟನೆಗಳನ್ನೂ ಅನುಭವಿಸಿರುವುದೂ ಇದೇ ಚಾರಣಗಳಲ್ಲಿ.ಸರ್ವಜ್ಞ ಪೀಠದಿಂದ ಅರಿಷಿಣ ಗುಂಡಿ ಜಲಪಾತಕ್ಕೆ ಸುಮಾರು ಇಪ್ಪತ್ತು ಕಿಮೀಗೂ ದೂರದ ಚಾರಣ ಹಾದಿಯಿದೆ.ಒಮ್ಮೆ ಇದರಲ್ಲಿ ಹೋಗಿ ಜಲಪಾತದ ಬುಡದಲ್ಲಿ ಕುಳಿತಾಗ ನಮ್ಮಂತೆಯೇ ಬಂದಿದ್ದ ಇನ್ನೊಂದು ತಂಡದ ಹುಡುಗರು ಮಂಗನಾಟ ಮಾಡುತ್ತ ನೋಡುನೋಡುತ್ತಲೆ ಒಬ್ಬ ನೀರಿನ ಗುಂಡಿಗೆ ಬಿದ್ದಿದ್ದೂ,ತಕ್ಷಣವೇ ಈಜು ಬರುವ ಜತೆಯವನೊಬ್ಬ ಅವನನ್ನು ಮೇಲೆತ್ತಿದ್ದೂ ಆಗಿ ಮೈ ನಡುಗಿಸಿತ್ತು! ಇಲ್ಲಿ ಅನಾಮಿಕ ಜಲಪಾತಗಳೂ ಸುಮಾರಿವೆ. ನಾನೂ ನಾಗರಾಜನೂ ಇಂಥದ್ದೇ ಜಲಪಾತವೊಂದರ ನೀರಿನ ಸದ್ದನ್ನೇ ಹಿಡಿದು ಕಡಿದಾದ ಇಳಿಜಾರಲ್ಲಿ ಹುಡುಕಾಟ ನಡೆಸಿದ್ದೆವು. ಕೊನೆಗೂ ಮೈಕೈ ಎಲ್ಲ ತರಚಿಕೊಂಡು ಇಳಿದರೆ ಕಂಡಿದ್ದೇನು, ಒಂದಲ್ಲ ಎರಡಲ್ಲ ನಾಲ್ಕೈದು ಚಿಕ್ಕದೊಡ್ಡ ಸರಣಿ ಜಲಪಾತಗಳು! ರಾತ್ರಿ ಚಳಿ ತಡೆಯಲಾರದೇ ಮೇಲೆ ಕಟ್ಟಿದ್ದ ಟಾರ್ಪಾಲನ್ನೇ ಬಿಚ್ಚಿ ಹೊದ್ದುಕೊಂಡಿದ್ದು, ಮುಸಲಧಾರೆಯಂತೆ ಸುರಿವ ಮಳೆಯಲ್ಲೇ ಹತ್ತಿದ್ದು, ಟಿವಿಎಸ್ ಎಕ್ಸೆಲನ್ನು ದೂಡಿಕೊಂಡೇ ಹೋಗಿದ್ದು ಇಂಥ ಹತ್ತು ಹಲವಾರು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು ಇದೇ ಕೊಡಚಾದ್ರಿ!  ಪ್ರತಿ ಋತುಮಾನದಲ್ಲು ಇದನ್ನು ನೋಡಬೇಕೆಂದು ಬಿರುಬಿಸಿಲು,ಜಡಿಮಳೆ,ಛಳಿಯೆನ್ನದೇ ಎಲ್ಲ ಸಂದರ್ಭದಲ್ಲೂ ಇದನ್ನು ಆರೋಹಣಗೈದ ನಮ್ಮನ್ನೆಂದೂ ಕೊಡಚಾದ್ರಿ ನಿರಾಶೆಗೊಳಿಸಿದ್ದೇ ಇಲ್ಲ. ಬೇಸಿಗೆಯಲ್ಲಿ ದೂರದೂರಕ್ಕೆ ಕಾಣುವ ದೃಶ್ಯಾವಳಿ,ತಂಪು ತಂಪು ನೀರಿನ ಧಾರೆ,ನೀಲಾಕಾಶದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮೇಲೆದ್ದಿರುವ ಪರ್ವತಗಳು, ಎರಡೂ ಬದಿ ಸಾಲಾಗಿರುವ ತನ್ನದೇ ಪರ್ವತ ಸಾಲುಗಳಿಂದ ಕೊಡಚಾದ್ರಿ ಕಂಗೊಳಿಸಿದರೆ ಸಪ್ಟೆಂಬರಿನ ನಂತರ ಇಡೀ ಪ್ರದೇಶವೇ ಹಸಿರು ಕಾರ್ಪೆಟ್ಟಿನಂತೆ ಕಂಗೊಳಿಸುತ್ತದೆ.ಇದಕ್ಕೆ ಕುಂದಣವನಿಟ್ಟಂತೆ ಹಸಿರು ಹುಲ್ಲಿನ ಮಧ್ಯೆ ತರತರದ ಹೂವುಗಳು.ಹಿನ್ನೆಲೆಯಲ್ಲಿ ನೀಲಾಕಾಶದಲ್ಲಿ ಹರಡಿರುವ ಹತ್ತಿಯ ಮೂಟೆಗಳಂತ ಮೋಡಗಳು.ಗುಡ್ಡದ ತುದಿಯಲ್ಲಿ ನಿಂತರೆ ಕೆಳಗಿನಿಂದ ಮೇಲೆ ಬಂದು ಮೈಸವರಿ ಹೋಗುವ ಮೋಡಗಳ ಕಚಗುಳಿ ಅದರ ಸೊಬಗೇ ಬೇರೆ! ಚಾರಣದ ಹುಚ್ಚಿರುವವರು ಬಿರುಮಳೆಯಲ್ಲಿ ಹೋದರೆ ಅದೇ ಮತ್ತೊಂದು ಅನುಭವ! ರಪರಪನೆಂದು ಒನಕೆಯಿಂದ ಬಾರಿಸಿದಂತೆ ಸುರಿಯುವ ಮಳೆ, ನಾಲ್ಕಡಿ ದೂರದಲ್ಲಿ ರಸ್ತೆಯಿದೆಯೇ ಪ್ರಪಾತವೇ ಕಾಣದಷ್ಟು ಮಂಜು, ಇಡೀ ಲೋಕದಲ್ಲಿ ನಾವು ಮಾತ್ರ ಇದ್ದೇವೆಯೋ ಅಥವಾ ಇದೇ ಬೇರೊಂದು ಲೋಕವೋ ಎಂದು ಭ್ರಮಿಸುವಂತಾ ಸನ್ನಿವೇಶ! ಪ್ರತಿಬಾರಿಯೂ ನಿತ್ಯನೂತನ ,ಪ್ರತಿಬಾರಿಯೂ ನಿಗೂಢ, ಪ್ರತಿಬಾರಿಯೂ ಸವಾಲೊಡ್ಡುವ ಕೊಡಚಾದ್ರಿಗೆ ಕೊಡಚಾದ್ರಿಯೇ ಸಾಟಿ!! .
-ಶಿವರಾಜ್ ಉಡುಪ

Leave a Reply

Your email address will not be published. Required fields are marked *