ಡಿಸೆಂಬರ್​ನಲ್ಲಿ ರಣಜಿ: ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2019-20ರ ಸಾಲಿನ ದೇಶೀಯ ಕ್ರಿಕೆಟ್​ನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ 17ರಂದು ದುಲೀಪ್ ಟ್ರೋಫಿಯೊಂದಿಗೆ ಈ ಬಾರಿಯ ಋತು ಆರಂಭವಾಗಲಿದ್ದು, 2020ರ ಮಾರ್ಚ್ 18ರಿಂದ 22ರವರೆಗೆ ನಡೆಯಲಿರುವ ಇರಾನಿ ಟ್ರೋಫಿ ಯೊಂದಿಗೆ ಮುಕ್ತಾಯ ಕಾಣಲಿದೆ. ಒಟ್ಟು ಏಳು ತಿಂಗಳ ಅವಧಿಯಲ್ಲಿ ವಿವಿಧ ವಯೋಮಿತಿ ವಿಭಾಗಗಳಲ್ಲಿ ಬಿಸಿಸಿಐ 2036 ಪಂದ್ಯಗಳನ್ನು ಆಯೋಜಿಸಲಿದೆ.

ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿಯೇ ಬಹಳ ಮುಖ್ಯ ಟೂರ್ನಮೆಂಟ್ ಎನಿಸಿರುವ ರಣಜಿ ಟ್ರೋಫಿಯ 86ನೇ ಆವೃತ್ತಿ ಡಿಸೆಂಬರ್​ನಿಂದ ಮಾರ್ಚ್ವರೆಗೆ ನಡೆಯಲಿದೆ. ಕಳೆದ ಋತುವಿನಲ್ಲಿದ್ದ ಮಾದರಿಯಲ್ಲಿಯೇ ಈ ಬಾರಿಯ ಟೂರ್ನಿ ನಡೆಯಲಿದೆ. ಎ ಹಾಗೂ ಬಿ ಗುಂಪಿನಿಂದ ಅಗ್ರ 5 ಸ್ಥಾನ ಪಡೆದ ತಂಡಗಳು ಕ್ವಾರ್ಟರ್​ಫೈನಲ್​ಗೇರಲಿದ್ದರೆ, ಸಿ ಗುಂಪಿನ ಅಗ್ರ 2 ಹಾಗೂ ಪ್ಲೇಟ್ ಗುಂಪಿನ ಅಗ್ರ ತಂಡ ಕ್ವಾರ್ಟರ್​ಫೈನಲ್ ಪ್ರವೇಶ ಪಡೆಯಲಿದೆ. ಕಳೆದ ವರ್ಷ ಪ್ಲೇಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದ ಉತ್ತರಾಖಂಡ ಈ ಬಾರಿ ಸಿ ಗುಂಪಿನಲ್ಲಿ ಆಡಲಿದ್ದರೆ, ಸಿ ಗುಂಪಿನಲ್ಲಿ ಕೊನೇ ಸ್ಥಾನ ಪಡೆದಿದ್ದ ಗೋವಾ, ಪ್ಲೇಟ್ ಗುಂಪಿಗೆ ಇಳಿಯಲಿದೆ. ಕಳೆದ ವರ್ಷ ಎ-ಬಿ ಗುಂಪಿನಲ್ಲಿದ್ದು, ಕೊನೇ ಸ್ಥಾನ ಪಡೆದಿದ್ದ ಮಹಾರಾಷ್ಟ್ರ ಹಾಗೂ ಛತ್ತೀಸ್​ಗಢ ತಂಡಗಳು ಈ ಬಾರಿಗೆ ಸಿ ಗುಂಪಿಗೆ ಇಳಿಯಲಿದ್ದು, ಸಿ ಗುಂಪಿ ನಲ್ಲಿ ಅಗ್ರಸ್ಥಾನ ಪಡೆದಿದ್ದ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಎ-ಬಿ ಗುಂಪಿನಲ್ಲಿ ಆಡಲಿದೆ.

ಐಪಿಎಲ್ ಹರಾಜಿಗೂ ಮುನ್ನ ಮುಷ್ತಾಕ್ ಅಲಿ

ದೇಶದ ಪ್ರಮುಖ ದೇಶೀಯ ಟಿ20 ಟೂರ್ನಿ ಆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಈ ಬಾರಿ ಐಪಿಎಲ್ ಹರಾಜಿಗೂ ಮುನ್ನ ನಡೆಯಲಿದೆ. ಕಳೆದ ವರ್ಷ ಮುಷ್ತಾಕ್ ಅಲಿ ಟೂರ್ನಿ ಫೆಬ್ರವರಿ-ಮಾರ್ಚ್​ನಲ್ಲಿ ನಡೆದಿತ್ತು. ಆದರೆ, ಐಪಿಎಲ್ ಹರಾಜು ಅದಕ್ಕೂ ಮುನ್ನವೇ ಅಂದರೆ ಡಿಸೆಂಬರ್-ಜನವರಿಯಲ್ಲಿಯೇ ಮುಕ್ತಾಯ ಕಂಡಿತ್ತು. ಆದರೆ, ಈ ಬಾರಿಯ ಟೂರ್ನಿ ನವೆಂಬರ್ 8ರಿಂದ ಡಿಸೆಂಬರ್ 1ರವರೆಗೆ ನಡೆಯಲಿದೆ.

ಮಹಿಳೆಯರ ಟಿ20 ವಿಶ್ವಕಪ್​ಗೆ ಸಿದ್ಧತೆ

ಮುಂದಿನ ವರ್ಷ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ಮಹಿಳೆಯರ ಟಿ20 ವಿಶ್ವಕಪ್ ನಡೆಯಲಿದೆ. ಫೆ. 21 ರಿಂದ ಮಾರ್ಚ್ 8ರವರೆಗೆ ನಡೆಯಲಿರುವ ವಿಶ್ವಕಪ್​ಗಾಗಿ ಮಹಿಳಾ ವಿಭಾಗದಲ್ಲಿ ನಡೆಯಲಿರುವ ಎಲ್ಲ ವಯೋಮಿತಿಯ ದೇಶೀಯ ಟಿ20 ಟೂರ್ನಿಗಳು ಅದಕ್ಕೂ ಮುನ್ನವೇ ನಡೆಯಲಿದೆ. ಜನವರಿ 4 ರಿಂದ 11ರವರೆಗೆ ಸೀನಿಯರ್ಸ್ ವುಮನ್ಸ್ ಟಿ20 ಚಾಲೆಂಜರ್ ಟ್ರೋಫಿ ನಡೆಯಲಿದೆ. ಸೀನಿಯರ್ ವುಮೆನ್ಸ್ ಟಿ20 ಲೀಗ್ ಅಕ್ಟೋಬರ್​ನಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *