ಅಮಾಯಕ ರೈತರು ಬಲಿಯಾಗದಿರಲಿ

ಚನ್ನಪ್ಪಗೌಡ ನೊಂದ ಆನ್ನದಾತ

ಮೂಡಿಗೆರೆ : ತುಂಬಾ ಬೇಸರದಿಂದ ಬರೆಯುತ್ತಿದ್ದೇನೆ, ಇದ್ಯಾವ್ದನ್ನೂ ಬರೆಯಬೇಕು.. ಹೇಳಿಕೊಳ್ಳಬೇಕು ಅನ್ನೋ ಸಣ್ಣ ಉದ್ದೇಶ ಕೂಡ ನನಗಿರಲಿಲ್ಲ. ಆದ್ರೆ ಮನಸ್ಸಿನಲ್ಲಿರೋದ್ನ ಹೇಳಿಲ್ಲ ಅಂದ್ರೆ, ಬರೀಲಿಲ್ಲ ಅಂದ್ರೆ ಇನ್ನೂ ಅದೆಷ್ಟು ಅಮಾಯಕ ಜನ ನಮ್ಮ ವ್ಯವಸ್ಥೆಗೆ ಬಲಿಯಾಗ್ತಾರೋ ಅನ್ನೋ ಭಯದಿಂದಲೇ ಬರೆಯುತ್ತಿದ್ದೇನೆ.. ಹೌದು, ಸಮಯ ಸರಿಯಾಗಿ 3.30ರ ಹೊತ್ತಿಗೆ (ನಿನ್ನೆ ಮಧ್ಯಾಹ್ನ) ನನಗೊಂದು ಕರೆ ಬಂತು. ಮಳೆಯಿಂದ ನಾಲ್ಕು ಎಕರೆ ಜಮೀನನ್ನ ಕಳೆದುಕೊಂಡಿದ್ದ ರೈತರೊಬ್ರು, ಪರಿಹಾರ ಸಿಗದ ಹಿನ್ನೆಲೆಯಲ್ಲಿ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಆ ಕರೆಯಲ್ಲಿತ್ತು. ಆ ಕ್ಷಣ ಒಮ್ಮೆಲ್ಲೇ ಶಾಕ್ ಆಗಿ ನಾನು ಮಲಗಿದ್ದ ಹಾಸಿಗೆಯಿಂದ ಎದ್ದು ಕೂತೆ. ಕಳೆದ 45 ದಿನಗಳಿಂದಲೂ ಮಹಾಮಳೆಗೆ ತುತ್ತಾಗಿದ್ದ ಮೂಡಿಗೆರೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಓಡಾಡಿಕೊಂಡು ಮಲೆನಾಡಿನ ಸಮಸ್ಯೆಯನ್ನ ನಮ್ಮನಾಳುವ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆ ತೆರೆದಿಡೋ ಸಣ್ಣ ಪ್ರಯತ್ನ ಮಾಡಿ ಮೂರು ದಿನಗಳ ಹಿಂದಷ್ಟೇ ಚಿಕ್ಕಮಗಳೂರಿಗೆ ನಾನು ಹಿಂದಿರುಗಿದ್ದೆ. ಹೀಗೆ ಸತತವಾಗಿ 45 ದಿನಗಳಿಂದ ಹಲವೆಡೆ ಗುಡ್ಡ ಹತ್ತಿ ಇಳಿದು, ಕಾಡು ಮೇಡು ಅಲೆದು, ಕೀಲೋ ಮೀಟರ್ ಗಟ್ಟಲೇ ದೂರ ಮಳೆಯಲ್ಲಿ ನೆನೆದ ಪರಿಣಾಮವೋ ಏನೋ, ತುಂಬಾನೇ ಸುಸ್ತಾಗಿ ಹೋಗಿದ್ದೆ. ಸಣ್ಣ ಪುಟ್ಟ ಜ್ವರಕ್ಕೆಲ್ಲಾ ಡೋಂಟ್ ಕೇರ್ ಎನ್ನದ ನಾನು ಕಳೆದ ಎರಡು ದಿನಗಳಿಂದ ಬೆಂಬಿಡದೇ ಕಾಡುತ್ತಿದ್ದ ಜ್ವರಕ್ಕೆ ಸಂಪೂರ್ಣ ಸೋತು ಹೋಗಿದ್ದೆ. ಕೊನೆಗೆ ನಡೆಯಲಾರದಷ್ಟು ಸುಸ್ತು, ಮೈ ಸುಡಲಾರಂಭಿಸಿದಾಗ ವಿಧಿಯಿಲ್ಲದೇ ಮೊನ್ನೆ ರಾತ್ರಿ ಆಸ್ಪತ್ರೆಗೂ ಹೋಗಿ ಬಂದಿದ್ದೆ. ಹಾಗಾಗಿಯೇ ಮಧ್ಯಾಹ್ನದ ಮೂರು ಮಾತ್ರೆಗಳನ್ನ ನುಂಗಿ ಆಗಷ್ಟೇ ಮಲಗಿಕೊಂಡಿದ್ದೆ. ಆ ಹೊತ್ತಿಗಾಗಲೇ ಆ ಕಡೆಯಿಂದ ಬಂದ ಕರೆ ನನ್ನ ಸುಡುತ್ತಿದ್ದ ದೇಹವನ್ನ ಕ್ಷಣಮಾತ್ರದಲ್ಲಿ ತಣ್ಣಗಾಗಿಸಿತು. ಹಾಗಾಗೀಯೇ ಎರಡೆರಡು ಬಾರಿ ಕೇಳ್ದೇ, ನಿಜವಾಗಲೂ ಕಾಫಿ ತೋಟ ಕಳೆದುಕೊಂಡಿದ್ರಾ, ಅವರೇ ಶೂಟ್ ಮಾಡಿಕೊಂಡಿದ್ದಾ..? ಹೀಗೆ ಕೇಳುತ್ತಲೇ ಹೋದಾಗ ಹೌದು ಸರ್ ಅಂತಲೇ ಆ ಕಡೆಯಿಂದ ಉತ್ತರ ಬಂತು. ಸುದ್ದಿ ಪಕ್ಕಾ ಆದ್ಮೇಲೆ, ಗಂಟೆ ನಾಲ್ಕು ಗಂಟೆ ಸಮಯ ಆಗಿದ್ರೂ ಅದಾಗಲೇ ಸ್ಥಳಕ್ಕೆ ತೆರಳಲು ನಾನು ಮಾನಸಿಕವಾಗಿ ಹೊರಟು ನಿಂತಿದ್ದೆ. ಆದ್ರೆ ಒಂದು ಹೆಜ್ಜೆ ಮುಂದೆ ಇಡೋದಕ್ಕೂ ಹಾಳಾದ್ ಜ್ವರ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದ್ರೂ ಒಬ್ಬ ಅನ್ನದಾತನೇ ತನ್ನ ಕಣ್ಣೆದುರು ಕೊಚ್ಚಿ ಹೋದ ಕಾಫಿ ತೋಟವನ್ನ ಕಂಡು, ಪರಿಹಾರ ಸಿಗದೇ ಆತ್ಮಹತ್ಯೆ ಮಾಡಿಕೊಂಡಾಗ ಇದ್ಯಾವ್ ಜ್ವರ ಅಂತಾ ತೀರ್ಮಾನಿಸಿ ಕ್ಷಣಮಾತ್ರದಲ್ಲೇ ಸ್ಪಾಟ್ಗೆ ಹೊರಡಲು ಸಿದ್ದನಾದೆ. ಕ್ಷಣ ಕ್ಷಣಕ್ಕೂ ಆಫೀಸಿನಿಂದ ಕರೆ ಬರ್ತಿತ್ತು, ರೀಚ್ ಆದ್ರಾ.. ಇನ್ನೂ ಆಗಿಲ್ವಾ .. ಎಷ್ಟೊತ್ತು ಆಗುತ್ತೆ.. ? ಹೀಗೆ ಪ್ರತಿಬಾರಿ ಕರೆ ಬಂದಾಗಲೂ ಇದನ್ನೇ ಕೇಳ್ತಿದ್ರು. ಚಿಕ್ಕಮಗಳೂರಿನಿಂದ ಕಳಸ ಸರಿ ಸುಮಾರು 100 ಕೀಲೋ ಮೀಟರ್ ಇದೆ. ಈ ಮಾರ್ಗ ಕಡಿದಾದ ರಸ್ತೆ, ಅಂಕು ಡೊಂಕು ರಸ್ತೆಯಾಗಿರೋದ್ರಿಂದ ಅದಲ್ಲದೇ ಈ ಬಾರಿ ರಸ್ತೆಯ ಅಕ್ಕಪಕ್ಕದಲ್ಲೆಲ್ಲಾ ಕುಸಿದಿರುವುದರಿಂದ ಕನಿಷ್ಠ ಎರಡೂವರೆ ಗಂಟೆ ಕಳಸ ತೆರಳಲು ಬೇಕಾಗುತ್ತೆ. ಆದ್ರೆ ನಾವು 4.20ಕ್ಕೆ ಚಿಕ್ಕಮಗಳೂರು ಬಿಟ್ಟು 6ಗಂಟೆ ಹೊತ್ತಿಗೆ ಕಳಸ ತಲುಪಿದ್ದು ನಿಜಕ್ಕೂ ಪವಾಡವೇ ಸರಿ.. ಹೀಗೆ ಸಾಗುವಾಗ ಅದೆಷ್ಟೋ ಬಾರಿ ನಮ್ ಜೀವ ನಮ್ ಬಾಯಿಗೆ ಬಂದ್ಬಿಟ್ಟಿದ್ದು ಬೇರೆ ವಿಷ್ಯ ಬಿಡಿ. ಕೆಲವೊಬ್ಬರು ಅಡ್ಡಕಸುಬಿಗಳು ಮಾತಾಡೋ ಹಾಗೆ ಯಾವುದೋ ಟಿಆರ್ಪಿ ಬೆನ್ನುಬಿದ್ದು ಹೀಗೆ ಸುದ್ದಿನಾ ಚೇಸ್ ಮಾಡಿದ್ದಲ್ಲ. ಬದಲಾಗಿ ಒಬ್ಬ ಅಮಾಯಕ ರೈತನ ಸಾವಿಗೆ ನ್ಯಾಯ ಸಿಗಬೇಕು ಅನ್ನೋ ಕಾರಣಕ್ಕಾಗಿ ಅಷ್ಟೇ. ತಾನು ಹತ್ತಾರು ವರ್ಷಗಳ ಕಾಲ ಹಗಲಿರುಲೆನ್ನದೇ ಬೆವರು ಸುರಿಸಿ, ಕಷ್ಟಪಟ್ಟು ಕಾಪಾಡಿಕೊಂಡಿದ್ದ ಕಾಫಿ ತೋಟ ಕೊಚ್ಚಿ ಹೋದಾಗ ಆತ ಎಷ್ಟು ನೋವುಂಡಿರಬೇಕು.? ತನ್ನೆದೆಗೆ ತಾನೇ ಗುಂಡು ಹಾರಿಸಿಕೊಳ್ಳಬೇಕೆಂದ್ರೆ ಆತ ಎಷ್ಟು ಸಂಕಟ ಅನುಭವಿಸಿರಬೇಕು..? ಒಂದೇ ಒಂದು ಗುಂಡಿನಿಂದ ಆತನ ಗುಂಡಿಗೆಯೇ ಛಿದ್ರ ಛಿದ್ರವಾದಾಗ ಆ ಜೀವ ಕೊನೆಘಳಿಗೆಯಲ್ಲಿ ಎಷ್ಟು ನರಕಯಾತನೆ ಪಟ್ಟಿರಬೇಕು..? ಹೀಗೆ ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸನ್ನ ಹೊಕ್ಕಿದ್ದಾಗ ನಮಗೆ ಅದೆಂತಹ ಸವಾಲನ್ನೂ ಕೂಡ ಎದುರಿಸೋ ಶಕ್ತಿ ಬರುತ್ತೆ.. ಕೊನೆಗೂ ಕಳಸ ಆಸ್ಪತ್ರೆಗೆ ಹೋಗಿದಾಯ್ತು, ಮೃತ ಚನ್ನಪ್ಪಗೌಡರ ಮಗಳು ಸೇರಿದಂತೆ ಅವರ ಸಂಬಂಧಿಕರು, ಸ್ಥಳೀಯರು ಎಲ್ಲರನ್ನೂ ಮಾತಾಡಿಸಿದ್ದಾಯ್ತು. ಎಲ್ಲರೂ ಹೇಳಿದ್ದು ಒಂದೇ, ಚಿನ್ನದ ಹಾಗೆ ಕಾಫಿ ಹಾಗೂ ಅಡಿಕೆ ತೋಟವನ್ನ ಮಾಡಿಟ್ಟಿದ್ದರು, ಯಾವಾಗಲೂ ತೋಟ, ತೋಟ ಅಂತಾ ಜೀವ ಬಿಡ್ತಿದ್ರು.. ಕೊನೆಗೇ ಜೀವವನ್ನೂ ಅಲ್ಲೇ ಬಿಟ್ರು ಅನ್ನೋ ಮಾತು. ಇನ್ನೂ ಅಲ್ಲಿಂದ ಅವರೂರಿಗೆ ಹೋಗಿ ಚನ್ನಪ್ಪಗೌಡರ ಪತ್ನಿಯ ಪರಿಸ್ಥಿತಿಯೂ ಕಂಡೆ. (ಪತಿ ಕಾಫಿ ತೋಟದಲ್ಲಿ ಗುಂಡು ಹಾರಿಸಿಕೊಂಡು ಬಿದ್ದಾಗ ಜಾರಿ ಬಿದ್ದಿರಬೇಕು ಅಂತಾ ತಿಳಿದು ಸತ್ತಿರೋ ಗಂಡನನ್ನ ಮಾತನಾಡಿಸೋ ಪ್ರಯತ್ನ ಮಾಡಿದ್ರು ಚನ್ನಪ್ಪಗೌಡರ ಪತ್ನಿ) ಈ ಇಳಿವಯಸ್ಸಿನಲ್ಲಿ ಪತಿಯನ್ನ ಕಳೆದುಕೊಂಡ ಅವರ ದುಃಖವನ್ನ ನೋಡಿ ನನ್ನತ್ರ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನಾನೂ ಕೂಡ ಬಿಕ್ಕಿ ಬಿಕ್ಕಿ ಅತ್ತೆ. ಕೊನೆಗೂ ಮಹಾಮಳೆಗೆ ತಮ್ಮ ಕನಸಿನ ಗೋಪುರವೇ ಕಳಚಿ ಬಿದ್ದಾಗಲೇ ಚನ್ನಪ್ಪಗೌಡರು ಅರ್ಧ ಕುಗ್ಗಿ ಹೋಗಿದ್ರು. ಅನಾಹುತವನ್ನ ನೆನೆಪಿಸಿಕೊಂಡು ಅನೇಕ ಬಾರಿ ಎದೆಬಡಿದುಕೊಂಡು ನೋವು ತೋಡಿಕೊಳ್ಳುತ್ತಿದ್ದ ಚನ್ನಪ್ಪಗೌಡರನ್ನ ಹಲವರು, ತಲೆಕೆಡಿಸಿಕೊಳ್ಳಬೇಡಿ ಪರಿಹಾರ ಬರುತ್ತೆ ಅಂತಾ ಧೈರ್ಯ ತುಂಬಿದ್ರು.. ಆದ್ರೆ ವಿಪರ್ಯಾಸ ಅಂದ್ರೆ ಇವರಿಗೆ ಸರ್ಕಾರ ತಾತ್ಕಾಲಿಕವಾಗಿ ನೀಡಿದ್ದ ಪರಿಹಾರ 10,000ರೂಪಾಯಿ ಕೂಡ ದಕ್ಕಲಿಲ್ಲ ಅನ್ನೋ ವಿಚಾರ.. ಇನ್ನೂ ದೊಡ್ಡ ಮಟ್ಟದ ಪರಿಹಾರವಾದ್ರೂ ಸಿಗುತ್ತೆ ಅನ್ನೋ ಭರವಸೆಯನ್ನ ಅವರು ತಾನೇ ಹೇಗೆ ಇಟ್ಟುಕೊಳ್ಳೊಕೆ ಸಾಧ್ಯ ನೀವೇ ಹೇಳಿ.? ಇವರ ವಿಚಾರದಲ್ಲಿ ಇನ್ನೂ ಆಳಕ್ಕೆ ಇಳಿದು ನೋಡೋದಾದ್ರೆ ಅವರಿಗೆ ಸುಮಾರು ಆರು ಎಕರೆ ಜಾಗದಲ್ಲಿ ರೆಕಾರ್ಡ್ ಜಾಗ ಕೇವಲ ಒಂದೂವರೆ ಎಕರೆ ಮಾತ್ರ ಇರೋದು ಅನ್ನೋದು ಕುಟುಂಬಸ್ತರನ್ನ ಮಾತಾಡಿಸಿದಾಗ ಗೊತ್ತಾಯ್ತು. ತಲೆತಲಾಂತರಗಳಿಂದಲೂ ಹಿಡುವಳಿ ಮಾಡಿಕೊಂಡು ಬಂದ್ರೂ ಉಳಿದ ಜಾಗವನ್ನ ಅವರ ಹೆಸರಿಗೆ ಮಾಡಿಕೊಳ್ಳೋಕೆ ಚನ್ನಪ್ಪಗೌಡರಿಗೆ ಕೊನೆ ಕ್ಷಣದವರೆಗೂ ಆಗಿರಲಿಲ್ಲ. (ಇದು ಕೇವಲ ಚನ್ನಪ್ಪಗೌಡರಿಗೆ ಮಾತ್ರ ಅನ್ವಯವಾಗುವುದಿಲ್ಲ, ಅದೆಷ್ಟೋ ಮಲೆನಾಡಿಗರು ಸೇರಿದಂತೆ ಅನೇಕ ಸಣ್ಣಪುಟ್ಟ ರೈತರ ಸಮಸ್ಯೆ ಕೂಡ ಇದೆ. ಹೀಗಾಗಿಯೇ ಸದ್ಯ ಮಾಜಿ ಶಾಸಕ ಜೀವರಾಜ್ ಅವರು ಬಡರೈತರ ಪರ ದನಿ ಎತ್ತಿ ಹೋರಾಟ ಮಾಡುತ್ತಿರೋದು) ಅದೆಷ್ಟೋ ಭಾರೀ ಅನೇಕ ದಶಕಗಳಿಂದ ಮಾಡಿಕೊಂಡು ಬಂದಿರೋ ಭೂಮಿಯನ್ನ ನನ್ನ ಹೆಸರಿಗೆ ಮಾಡಿಕೊಡಿ ಅಂತಾ ಸಂಬಂಧಪಟ್ಟ ಕಚೇರಿಗಳಿಗೆ ಎಡತಾಕಿದ್ದೇ ಬಂತು, ಯಾವುದೇ ಪ್ರಯೋಜನವಾಗಲಿಲ್ಲ. ಇನ್ನೂ ಸರಿಯಾಗಿಯೇ ದಾಖಲೆಯೇ ಇಲ್ಲದ ತಾನು 60 ವರ್ಷಗಳ ಕಾಲ ಬೆವರು ಸುರಿಸಿ ದುಡಿದ ಬಂಗಾರದಂತಹ ಮಣ್ಣಿಗೆ ಸರ್ಕಾರ ಏನು ಪರಿಹಾರ ಕೊಡುತ್ತೆ..? ಈಗಾಗಲೇ ತೋಟ ಕೊಚ್ಚಿ ಹೋಗಿ ಒಂದು ತಿಂಗಳ ಮೇಲಾಯ್ತು.. ಕೆಳ ಹಂತದ ಅಧಿಕಾರಿಗಳು ಬಂದು ನೋಡ್ಕೊಂಡು ಹೋಗಿದ್ದು ಬಿಟ್ರೆ, ಜನಪ್ರತಿನಿಧಿಗಳಾಗಲಿ, ಮೇಲಾಧಿಕಾರಿಗಳಾಗಲಿ, ಸರ್ಕಾರಗಳಾಗಲಿ ಯಾರೊಬ್ಬರು ಚನ್ನಪ್ಪಗೌಡರಿಗೆ ಆಗಿದ್ದೂ ಆಗಿ ಹೋಯ್ತು, ನಾವಿದ್ದೀವಿ, ನಿಮ್ ಜೊತೆ ಎದೆಗುಂದಬೇಡಿ ಅಂತಾ ಬದುಕೋ ಆಸೆಯನ್ನ ನೀಡ್ಲಿಲ್ಲ. ಒಂದು ವೇಳೆ ಈ ಕೆಲಸವನ್ನ ಅವರು ಆತ್ಮಹತ್ಯೆ ಮಾಡಿಕೊಳ್ಳೋ ಮುನ್ನವೇ ಮಾಡ್ತಿದ್ರೆ ಇವತ್ತು ಚನ್ನಪ್ಪಗೌಡರು ಇಂತದ್ದೊಂದು ಕೆಟ್ಟ ನಿರ್ಧಾರವನ್ನ ಖಂಡಿತಾ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಆತ್ಮಹತ್ಯೆ ಮಾಡಿಕೊಂಡ ಮೇಲೆ 5 ಲಕ್ಷ ಪರಿಹಾರ ಅಂತಾ ಘೋಷಣೆ ಮಾಡ್ತಾರೆ..? ಯಾವ ಸುಖಕ್ಕೆ..? ಅದಿರಲಿ, ಚನ್ನಪ್ಪಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಗ್ಗಿನ ಜಾವ 10.30ರ ಸಮಯದಲ್ಲಿ. 12 ಗಂಟೆಯಾಗುವಷ್ಟರಲ್ಲಿ ಎಲ್ಲರಿಗೂ ಗೊತ್ತಾಗಿದೆ. ಆದ್ರೆ ಪೊಲೀಸ್ ಇಲಾಖೆಯವರನ್ನ ಬಿಟ್ರೆ, ನಮ್ಮ ಶಾಸಕರಾಗಲೀ, ಅಧಿಕಾರಿಗಳಾಗಲಿ ಸ್ಥಳಕ್ಕೆ ರಾತ್ರಿವರೆಗೂ ಹೋಗೋ ಕನಿಷ್ಠ ಮಾನವೀಯತೆಯನೂ ತೋರಿಸಲಿಲ್ಲ.(ಸ್ಥಳದಲ್ಲಿ ರಾತ್ರಿ 10.30ರವೆಗೆ ನಾನಿದ್ದೆ.. ಹಾಗಾಗೀ ಖಚಿತಪಡಿಸಿಕೊಂಡು ಹೇಳಿದ್ದು). ಬದುಕಿದ್ದಾಗಲೂ ಬದುಕುವ ಆಸೆಯನ್ನ ನಮ್ಮನಾಳುವ ಸರ್ಕಾರಗಳು ನೀಡಲ್ಲ, ಆ ರೈತ ಸತ್ತಾಗಲೂ ಸ್ಪಂದಿಸೋ ಕೆಲಸ ಮಾಡಲ್ಲ ಅಂತಾದ್ರೆ ಈ ವ್ಯವಸ್ಥೆ ಮೇಲೆ ಒಬ್ಬ ಜನಸಾಮಾನ್ಯ ಹೇಗೆ ತಾನೇ ನಂಬಿಕೆ ಇಡಲು ಸಾಧ್ಯ..? ಇದು ಕೇವಲ ಈಗಿರೋ ಬಿಜೆಪಿ ವೈಫಲ್ಯತೆ ಮಾತ್ರವಲ್ಲ, ಬದಲಾಗಿ ಎಲ್ಲಾ ಪಕ್ಷಗಳ ಹಣೆಬರಹ ಕೂಡ ಇದೆಯೇ.. ಇಡೀ ರಾಜ್ಯದಲ್ಲೇ ಈ ಬಾರಿ ಅತೀ ಹೆಚ್ಚು ಭೂ ಕುಸಿತವಾಗಿರೋದು ಚಿಕ್ಕಮಗಳೂರು ಜಿಲ್ಲೆಯಲ್ಲಿ.. ಆದ್ರೂ ಸರ್ಕಾರಗಳು ಪರಿಹಾರ ಭರವಸೆಯಲ್ಲೇ ಕಾಲ ಕಳೆಯುತ್ತಿದೆ ವಿನಃ ಎಲ್ಲವನ್ನೂ ಕಳೆದುಕೊಂಡು, ಚನ್ನಪ್ಪಗೌಡರ ಹಾಗೇ ಮಾನಸಿಕವಾಗಿ ಜರ್ಜರಿತವಾಗಿರೋ ಸಂತ್ರಸ್ಥನಿಗೆ ಬದುಕುವ ಆಸೆಯನ್ನ ಹುಟ್ಟಿಸುತ್ತಿಲ್ಲ. ಇನ್ನೂ ಇಷ್ಟೆಲ್ಲಾ ವೈಫಲ್ಯ ಈ ಸರ್ಕಾರಗಳು ಮಾಡ್ತಿದ್ರೂ, ಅದನ್ನ ಸಮರ್ಥವಾಗಿ ಬೆರಳು ಮಾಡಿ ತೋರಿಸಿ, ಸಂತ್ರಸ್ಥರಿಗೆ ನ್ಯಾಯ ಕೊಡಿಸೋ ತಾಕತ್ತು ನಮ್ಮ ವಿರೋಧ ಪಕ್ಷಗಳಿಗಿಲ್ಲ.. ಇನ್ನೂ ಇಂಥಾ ವ್ಯವಸ್ಥೆಯಲ್ಲಿ ಚನ್ನಪ್ಪಗೌಡರಂತಹ ಅದೆಷ್ಟೋ ಮಂದಿ ಹೇಗೆ ತಾನೇ ಜೀವ ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯ..?
ಕೊನೆಗೊಂದು ಮಾತು, ನಾವು ಸುದ್ದಿಗಾಗಿ ತೆಗೆದುಕೊಳ್ಳೋ ರಿಸ್ಕನ್ನ ಇಲ್ಲಿ ಏನಕ್ಕಾಗಿ ಪ್ರಸ್ತಾಪಿಸಿದ್ದು ಅಂದ್ರೆ, ಯಾವುದೇ ಅತಿಶೋಕ್ತಿಗಲ್ಲ, ಬದಲಾಗಿ ನಾವು ಸಂಬಂಧಪಟ್ಟವರನ್ನ ಎಚ್ಚರಿಸಲು ಮಾಡೋ ಪ್ರಯತ್ನದ ಸ್ವಲ್ಪ ಮಟ್ಟಿನ ಶ್ರಮವನ್ನಾದ್ರೂ ಜನರಿಂದ ಮತ ಹಾಕಿಸಿಕೊಂಡ ನೀವುಗಳು ಮಾಡಿದ್ರೆ, ನಿಮ್ಮನ್ನೇ ನಂಬಿಕೊಂಡಿರೋ ಅದೆಷ್ಟೋ ಅಮಾಯಕ ಜನರ ಪ್ರಾಣ ಉಳಿಯುತ್ತೇ ಅನ್ನೋ ಕಾರಣಕ್ಕಾಗಿ ಮಾತ್ರ.. ಫೈನಲ್ಲಿ, ಈ ವ್ಯವಸ್ಥೆಯನ್ನ ನಂಬಿಕೊಂಡು ನಿಮ್ಮ ಅಮೂಲ್ಯ ಜೀವನವನ್ನ ಬಲಿಕೊಡದಿರಿ ಅನ್ನದಾತರೇ.. ನಿಮ್ಮನ್ನೇ ನಂಬಿಕೊಂಡು ಬದುಕು ಸಾಗಿಸೋ ನಿಮ್ಮವರಿಗಾಗಿಯಾದ್ರೂ ಬದುಕುವ ಮನಸು ಮಾಡಿ. ನಾವು ಈ ಕ್ಷಣದಲ್ಲಿ ಸೋತಿರಬಹುದು. ಆದ್ರೆ ಧೈರ್ಯ ಮಾಡಿ ಎದ್ದು ನಿಂತ್ರೆ ಗೆಲುವಿನ ನಾಳೆಯ ದಿನ ನಮ್ಮದಾಗುತ್ತೆ…

ಇನ್ನಾದ್ರೂ ನಮ್ಮ ವ್ಯವಸ್ಥೆ ಸರಿ ದಾರಿಗೆ ಬರಲಿ

ಅಮಾಯಕ ರೈತರು ಬಲಿಯಾಗದಿರಲಿ

(ಈ ಮೂಲಕ ರಾತ್ರಿ 3 ಗಂಟೆ ವೇಳೆಯಲ್ಲಿ ನಮ್ಮ ವ್ಯವಸ್ಥೆಯ ಹೊಣೆಗೇಡಿತನದ ವಿರುದ್ಧ ಆಕ್ರೋಶಗೊಂಡು ಬರೆಯಲು ಕಾರಣವಾದ ಈ ಪೋಸ್ಟ್ ಇಲ್ಲಿಗೆ, ಇಂದಿಗೆ ಕೊನೆಯಾಗಲಿ ಎಂಬ ಚಿಕ್ಕ ಆಸೆಯಿಂದ ಚನ್ನಪ್ಪಗೌಡರಲ್ಲಿ ಕ್ಷಮೆಕೋರಿ, ಅವರ ಆತ್ಮಕ್ಕೆ ಶಾಂತಿಕೋರಿ ನನ್ನ ಬರವಣಿಗೆಯನ್ನ ಮುಗಿಸುತ್ತಿದ್ದೇನೆ. )

-ಪ್ರಶಾಂತ್ ಮೂಡಿಗೆರೆ

ಬೆಟ್ಟ ಕುಸ್ತಿರಿವುದು
ಕೆರೆಯ ತಡೆ ಗೋಡೆ ಹೊಡೆದಿರುವುದು
ಸಣ್ಣ ತೋರೆ ಇದ್ದ ಜಾಗದಲ್ಲಿ ಹೊಸ ಹೊಳೆಯೆ ಸೃಷ್ಠಿಯಾಗಿದೆ

One thought on “ಅಮಾಯಕ ರೈತರು ಬಲಿಯಾಗದಿರಲಿ

Leave a Reply

Your email address will not be published. Required fields are marked *